ಸೋಮೇಶ್ವರ 2

	ಕಲ್ಯಾಣದ ಚಾಳುಕ್ಯ ವಂಶದ ದೊರೆ (1068-76). ಒಂದನೆಯ ಸೋಮೇಶ್ವರ ಆಹವಮಲ್ಲನ ಮಗ ಮತ್ತು ಉತ್ತರಾಧಿಕಾರಿ. ಭುವನೈಕಮಲ್ಲನೆಂದು ಪ್ರಸಿದ್ಧನಾಗಿದ್ದ ಈತ 1068 ಏಪ್ರಿಲ್ 11ರಂದು ಪಟ್ಟಕ್ಕೆ ಬಂದ. ಶಾಸನವೊಂದು ಹೇಳುವಂತೆ ಇವನು ಇನ್ನೂ ಕಂಠಿಕೆಯನ್ನು ಧರಿಸುತ್ತಿದ್ದಂತೆಯೇ ಚೋಳ ದೊರೆ ವೀರರಾಜೇಂದ್ರ ಗುತ್ತಿ ಎಂಬಲ್ಲಿಗೆ ಬಂದು ಚಾಳುಕ್ಯರಾಜ್ಯದ ಮೇಲೆ ಮುತ್ತಿಗೆ ಹಾಕಿದ. ಆದರೆ ಅಲ್ಲಿ ನಡೆದ ಯುದ್ಧದಲ್ಲಿ ಚೋಳ ದೊರೆ ಪರಾಜಿತನಾಗಿ ಪಲಾಯನ ಮಾಡಿದ.

	ಅನಂತರ ಈ ಹಿಂದೆ ಆರನೆಯ ವಿಕ್ರಮಾದಿತ್ಯನ ಸಹಾಯದಿಂದ ಪರಮಾರ ಸಿಂಹಾಸನವನ್ನೇರಿದ್ದ ಜಯಸಿಂಹನನ್ನು ಅವನ ವೈರಿ ಉದಯಾದಿತ್ಯ ಸೋಲಿಸಿ ಪರಮಾರರಾಜ್ಯವನ್ನು ಹಿಡಿದಿದ್ದರಿಂದ ಅವನನ್ನು ಶಿಕ್ಷಿಸಲು ಸೋಮೇಶ್ವರ ಉತ್ತರಕ್ಕೆ ನಡೆದ. ಕಳಚುರಿ ಕರ್ಣ ಮತ್ತು ಗುಜರಾತಿನ ಚಾಳುಕ್ಯ ಕರ್ಣ ಇವರೂ ಇವನ ಜೊತೆ ಸೇರಿ ಉದಯಾದಿತ್ಯನ ಮೇಲೆ ಬಿದ್ದರೂ ಪರಾಭವವನ್ನು ಅನುಭವಿಸಿ ಹಿಮ್ಮೆಟ್ಟಬೇಕಾಯಿತು.

	ಸೋಮೇಶ್ವರ ತನ್ನ ಕಿರಿಯ ಸೋದರನಾದ ವಿಕ್ರಮಾದಿತ್ಯನ ರಾಜನಿಷ್ಠೆ ಯನ್ನು ಸಂದೇಹಿಸುತ್ತಿದ್ದನೆನ್ನಲು ಸಾಕಷ್ಟು ಆಧಾರಗಳಿವೆ. ಉತ್ತರದಲ್ಲಿ ಪರಮಾರ ರಾಜ್ಯಕ್ಕಾಗಿ ಉದಯಾದಿತ್ಯ ಮತ್ತು ಜಯಸಿಂಹರ ನಡುವೆ ಉಂಟಾಗಿದ್ದ ಹೋರಾಟದಲ್ಲಿ ಜಯಸಿಂಹನಿಗೆ ಸಹಾಯ ಮಾಡುತ್ತಿದ್ದ ವಿಕ್ರಮಾದಿತ್ಯನನ್ನು ಸೋಮೇಶ್ವರ ಹಿಂದಕ್ಕೆ ಕರೆಸಿಕೊಂಡ. ಉತ್ತರ ದೊರೆಗಳ ಸಹಾಯದಿಂದ ವಿಕ್ರಮಾದಿತ್ಯ ತನ್ನನ್ನು ಪದಚ್ಯುತಿಗೊಳಿಸ ಬಹುದೆಂಬ ಸಂದೇಹವೇ ಸೋಮೇಶ್ವರನ ಈ ವರ್ತನೆಗೆ ಕಾರಣವೆನ್ನ ಬಹುದು. ಇದೇ ರೀತಿಯ ಕೆಲವಾರು ಘಟನೆಗಳಿಂದ ಸೋಮೇಶ್ವರ ವಿಕ್ರಮಾದಿತ್ಯರ ನಡುವೆ ವೈಮನಸ್ಯ ತಲೆದೋರಿತು. 1073-76ರ ವರೆಗೆ ಸೋಮೇಶ್ವರ ಬನವಾಸಿಯ ಬಳಿಯಲ್ಲಿ ಬೀಡುಬಿಟ್ಟಿದ್ದನೆಂದು ತಿಳಿದುಬರುತ್ತದೆ. ಬಂಕಾಪುರ ಇವನ ಎರಡನೆಯ ರಾಜಧಾನಿಯಾಗಿತ್ತು. ಪೂರ್ವದಲ್ಲಿ ಹಲವಾರು ಯುದ್ಧಗಳಿಗೆ ಕಾರಣವಾದ ವೆಂಗಿ ದೇಶದ ಮೇಲೆ ಚಾಳುಕ್ಯರ ಸಿಂಹಾಸನಕ್ಕಾಗಿ ಹೋರಾಟ ನಡೆಸಲು ಉದ್ಯುಕ್ತನಾದ ವಿಕ್ರಮಾದಿತ್ಯ ಚೋಳರೊಂದಿಗೆ ರಕ್ತಸಂಬಂಧವನ್ನು ಬೆಳೆಸಿ, ಅವರ ಸ್ನೇಹ ಬೆಳೆಸಿದ. ಸೋಮೇಶ್ವರ ವಿಕ್ರಮಾದಿತ್ಯನಿಗೆ ಸೆರೆಸಿಕ್ಕನೆಂದು ಬಿಲ್ಹಣ ತನ್ನ ಕಾವ್ಯದಲ್ಲಿ ತಿಳಿಸುತ್ತಾನೆ. 1071ರ ಕೆಲವು ದಾಖಲೆಗಳಲ್ಲಿ ವಿಕ್ರಮಾದಿತ್ಯನನ್ನು ಚಾಳುಕ್ಯ ದೊರೆ ಎಂದು ಉಲ್ಲೇಖಿಸಲಾಗಿದೆ. ಆದರೂ 1086ರ ವರೆಗೆ ಸೋಮೇಶ್ವರ ದೊರೆಯಾಗಿದ್ದನೆನ್ನಲು ಆಧಾರಗಳಿವೆ. ಅನಂತರ ವಿಕ್ರಮಾದಿತ್ಯ ಪಟ್ಟಕ್ಕೆ ಬಂದ.

	ಕಂಚಲದೇವಿ ಮತ್ತು ಮೈಳಲದೇವಿಯರು ಸೋಮೇಶ್ವರನ ಪತ್ನಿಯರು. ಈತನಿಗೆ ಒಬ್ಬ ಮಗಳಿದ್ದು ಆಕೆ ಅಯೋಧ್ಯಾಪುರಾಧೀಶ್ವರ ನೆನಿಸಿದ ಮಹಾಮಂಡಲೇಶ್ವರ ರವಿಯರಸನನ್ನು ಮದುವೆಯಾಗಿದ್ದಂತೆ ತೋರುತ್ತದೆ. ಮಹಾಮಂಡಲೇಶ್ವರ ಲಕ್ಷ್ಮರಸ ಇವನ ಅಧಿಕಾರಿಗಳಲ್ಲಿ ಅತಿ ಪ್ರಮುಖನಾದವ. ಈತ ರಾಜನ ಸಮೀಪದ ಸಲಹೆಗಾರ ಹಾಗೂ ಹಿತೈಷಿಯಾಗಿದ್ದ. ತನ್ನ ಇಬ್ಬರು ತಮ್ಮಂದಿರ ಬಳಿಕ ಈತನೇ ಪ್ರಮುಖ ನೆಂದು ಶಾಸನವೊಂದರಲ್ಲಿ ಹೇಳಿದೆ. ಬೆದ್ದಣ ಚೋಳ, ಮಹಾಪ್ರಧಾನ ಬಲದೇವಯ್ಯ, ನೊಳಂಬಾಧಿರಾಜ ಸಿಂಗಣದೇವ, ಸಾಕಿಮಯ್ಯ ಬಡರಕುಂದ ಮಹಾಸಾಮಂತ ಕಲಿಯಮ್ಮರಸ, ಮಣಲೇರಾನ್ವಯದ ಮಹಾಸಾಮಂತ ಜಯಕೇಶಿಯರಸ ಮುಂತಾದವರು ಈತನ ಇತರ ಅಧಿಕಾರಿಗಳು ಮತ್ತು ಸಾಮಂತರು.    
 	(ಎಚ್.ಎಮ್.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ